ಸುಮಾರು ೫ ವರುಷಗಳ ಹಿಂದೆ ಎಸ್. ಎಲ್ ಬೈರಪ್ಪವರ "ಪರ್ವ" ಕಾದಂಬರಿ ಓದಿದ ಮೇಲೆ ಅದೇ ದಾಟಿಯಲ್ಲಿ ಲೇಖಕಿಯೋಬ್ಬರು (ಹೆಸರು ಮರೆತು ಹೋಗಿದೆ) ಶ್ರೀ ಕೃಷ್ಣನ ಬಗ್ಗೆ ಬರೆದ ಸಣ್ಣ ಕಾದಂಬರಿಯೊಂದನ್ನು ಓದಿದ್ದೆ. ಅದನ್ನು ಓದುತ್ತಿರುವಾಗ ಪೂತನಿ ಕಥೆಯನ್ನು ಈ ರೀತಿಯಲ್ಲಿ ಬರೆಯಬಹುದಿತ್ತು ಅಂದುಕೊಂಡೆ. ಅದನ್ನು ಇಲ್ಲಿ ಗೀಚಿದ್ದೇನೆ.
*******************
ಕ೦ಸನು ನಡುರಾತ್ರಿಯಲ್ಲಿ, ತನ್ನ ಮ೦ಚದ ಮೇಲೆ ನಿದ್ದೆಯಿಂದ ಎದ್ದು ಕುಳಿತಿದ್ದಾನೆ. ಅವನ ಮೈ ಎಲ್ಲ ಬೆವರಿತ್ತು. ಮುಖದಲ್ಲಿ ಭಯ ಮನೆ ಮಾಡಿತ್ತು.ಯಾವುದೋ ಒಂದು ಕನಸನ್ನು ಆತನು ಕಂಡಿರಬೇಕು, ಅದಕ್ಕೆ ಅವನು ಅಂತ ಸ್ಥಿತಿಯಲ್ಲಿದ್ದನು. ಅವನು ಕಂಡ ಕನಸಾದರು ಏನು? ತನ್ನ ಸಾವನ್ನೇ ತಾನೇ? ಅದು ಯಾರಿಂದ? ತನ್ನ ಪ್ರೀತಿಯ ತಂಗಿ ಗರ್ಭದಲ್ಲಿ ಹುಟ್ಟಿದಂತ ಸೋದರಳಿಯನಿಂದ. ತನ್ನ ಕೈ ಇಂದಲೇ ತಂಗಿಯ ೮ನೇ ಮಗುವನ್ನು, ಉಳಿದ ೭ ಮಕ್ಕಳನ್ನು ಕೊಂದಂತೆ, ಕೊಲ್ಲಬೇಕೆಂದು ಸೆರೆಮನೆಗೆ ಹೋದಾಗ ನೋಡಿದ್ದಾರು ಏನನ್ನು? ಅಲ್ಲಿ ಮಗುವಿರಲಿಲ್ಲ, ಅನುಮಾನ ಬಂದು ತಂಗಿಯ ಹೊಟ್ಟೆ ನೋಡಿದರೆ, ಇಳಿದ ಹೊಟ್ಟೆ ಹೆರಿಗೆ ಆಗಿರುವುದನ್ನು ಖಚಿತ ಪಡಿಸುತ್ತಿತು. ಹಾಗದರೆ ಮಗು ಎಲ್ಲಿಗೆ ಹೋಯಿತು. ವಸುದೇವನೇನಾದರು, ಸೆರೆಮನೆಯಿಂದ ತಪ್ಪಿಸಿ ಕೊಂಡು ಎಲ್ಲದರು ಅಡಗಿಸಿಟ್ಟಿರುವನೋ? ಸಾದ್ಯವೇ ಇಲ್ಲ, ತನ್ನ ಕಾವಲುಗಾರ ಬಗ್ಗೆ ಅನುಮಾನ ಪಡುವುದು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ಎಂದು ಕೊಂಡು ಬಂದು ಮಲಗಿದ್ದಷ್ಟೆ, ಕನಸಿನಲ್ಲಿ ನಿನ್ನ ವೈರಿ ಗೋಕುಲದಲ್ಲಿ ಬೆಳೆಯುತ್ತಿದ್ದಾನೆ ಯಾರೋ ಹೇಳಿದಂತಾಯಿತು. ಯಾರು ಹೇಳಿದ್ದು ಎಂದು ನೆನಪು ಮಾಡಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರು ನೆನಪು ಬರುತ್ತಿಲ್ಲ. ಹಿಂದಿನ ದಿನ ಗೋಕುಲದಿಂದ ಒಂದು ಸುದ್ದಿ ಬಂದಿತ್ತಲ್ಲವೆ, ಒಂದು ಆಕರ್ಷಕವಾದ ಮಗುವಿನ ಜನನವಾಗಿದೆ, ಗೋಕುಲದಲ್ಲಿ ಎಲ್ಲರು ಆ ಮಗುವನ್ನು ನೋಡಲು ಮುಗಿ ಬೀಳುತ್ತಿದ್ದಾರೆ ಅಂತಲ್ಲವೇ. ಆ ಮಗುವು ಮತ್ತು ಕನಸಿನಲ್ಲಿ ಹೇಳಿದಂತ ಮಗುವು ಒಂದೆ ಆಗಿರಬಾರದೇಕೆ? ಕಂಸನು ಚಿಂತಿಸುತ್ತಿದ್ದಾನೆ. ಅಂದೇ ತಂಗಿ ದೇವಕಿಯ ಮದುವೆಯಂದು, ಯಾರೋ ಜನರ ಗುಂಪಿನಲ್ಲಿ ಹೇಳಿದರಲ್ಲ ನಿನ್ನ ತಂಗಿಯ ಗರ್ಭದಲ್ಲಿ ಹುಟ್ಟಿದ ೮ನೇ ಮಗುವಿನಿಂದಲೇ ನಿನ್ನ ಮರಣ ಎಂದು. ಅವಳನ್ನು ಅಂದೆ ಕೊಂದು ಹಾಕಿದ್ದಿದ್ದರೇ, ಚೆನ್ನಾಗಿರುತ್ತಿತ್ತು ಅಲ್ಲವೇ? ಆ ಮಗುವನ್ನು ಕೊಲ್ಲಬೇಕು, ನಾನು ಬದುಕಬೇಕು, ಹೇಗೆ, ಹೇಗೆ, ಎಂದು ಆಲೋಚನೆ ಮಾಡುತ್ತಿದ್ದಾನೆ. ಅಗ ಅವನ ಮನಸ್ಸಿನಲ್ಲಿ ಉಪಾಯವೊಂದು ಹೊಳೆಯಿತ್ತಿದಂತೆ, ವಿಕೃತವಾದ ಸಣ್ಣ ನಗೆಯೊಂದು ಅವನ ಮುಖದಲ್ಲಿ ಮೊಳೆಯಿತು.
**************
ಅವಳು ನೋಡಲಷ್ಟೇ ಅಲ್ಲ, ಮಾನಸಿಕವಾಗಿ ವಿಕೃತವಾಗಿದ್ದಳು. ಅವಳು ಗೊಲ್ಲರ ನಾಯಕನ ಮನೆಯ ಮುಂದೆ ಹೊಂಚು ಹಾಕಿ ಕುಳಿತಿದ್ದಳು. ಯಾರಿಗು ಗುರುತು ಸಿಗಬಾರದೆಂದು ವೇಷ ಮರೆಸಿ ಕೊಂಡಿದ್ದಳು. ಅವಳಿಗಂತು ವಿಚಿತ್ರವಾದ ಚಾಳಿ. ಅವಳಿಗೆ ಯಾರಿಗದರು ಮಕ್ಕಳಾದರೆ ಹಿಡಿಸುತ್ತಿರಲಿಲ್ಲ. ಆ ಮಗುವನ್ನು ಕೊಲ್ಲದೆ ಅವಳಿಗೆ ನಿದ್ರೆನೇ ಬರುತ್ತಿರಲಿಲ್ಲ. ತನಗೆ ಮಕ್ಕಳಾಗುವುದಿಲ್ಲ ಎಂದು ತಿಳಿದ ದಿನದಿಂದ ಅವಳು ಹೀಗೆ ಮಾನಸಿಕವಾಗಿ ವಿಕೃತಳಾಗಿದ್ದಳು. ಅವಳ ಹೆಸರು ಪೂತನಿ. ಅವಳು ಮಕ್ಕಳನ್ನು ಕೊಲ್ಲುತ್ತಿದ್ದ ರೀತಿಯಾದರು ಎಂತಾಹದು? ತನ್ನ ಮೊಲೆಗೆ ವಿಷವನ್ನು ಲೇಪಿಸಿ ಮಕ್ಕಳಿಗೆ ಮೊಲೆಯುಣಿಸುತ್ತಿದ್ದಳು. ಏನು ಅರಿಯದ ಮಗುವು, ಮೊಲೆ ತೊಟ್ಟನ್ನು ಬಾಯಿಗಿಟ್ಟಾಗ, ಸಹಜವಾಗಿ ಚೀಪುತ್ತದೆ. ವಿಷಪ್ರಾಶನವಾದ ಮಗುವು ಸಾಯುವುದು ಸಹಜ. ಜನರ ನಂಬಿಕೆ ಮಾತ್ರ ಬೇರೆ. ಅವಳು ವಿಷ ಹಾಲನ್ನು ಹೊಂದಿರುವ ಹೆಂಗಸು, ಅದಕ್ಕೇ ಮಕ್ಕಳು, ವಿಷ ಕುಡಿದ ಮೇಲೆ ಸಾಯುತ್ತಿರಬೇಕು ಎಂದಲ್ಲವೇ? ಮಗುವನ್ನು ಹೆತ್ತ ತಾಯಿಯಂದಿರು, ಮಗುವು ಎಷ್ಟು ಬೇಗ ಹಾಲು ಕುಡಿಯುವುದನ್ನು ಬಿಡುವುದೆಂದು ಕಾಯುತ್ತಿದ್ದರು. ಇಲ್ಲದಿದ್ದರೆ ಎಲ್ಲಾದರು ಪೂತನಿ ಬಂದು ನಮ್ಮ ಮಗುವನ್ನು ಕೊಂದರೇ ಏನು ಗತಿ ಅಂತ ಚಿಂತಿಸುತ್ತಿದ್ದರು.
ಅವಳು ಕಂಸನ ಆಶ್ರಯದಲ್ಲಿದ್ದಳು. ಕಂಸನು ಇಂತ ಅನೇಕರನ್ನು ಸಲಹುತ್ತಿದ್ದನು, ತನ್ನ ಕೆಲಸಗಳಿಗೆ ಉಪಯೋಗಿಸಿ ಕೊಳ್ಳುತ್ತಿದ್ದನು. ಇವಳನ್ನು ಕರೆದು ಆ ದಿನ ಕಂಸ ಹೇಳಿದ್ದಾದರು ಏನನ್ನು? ಗೋಕುಲದಲ್ಲಿ ಹುಟ್ಟಿದ ಮಗುವನ್ನು ಕೊಲ್ಲಲು ತಾನೇ? ಅದಕ್ಕೆ ಅವಳು ತುಂಬಾ ಸಂತೋಷ ಪಟ್ಟಿದ್ದಳು. ಇಂತಹ ಅವಕಾಶಕ್ಕಾಗಿ ಅನೇಕ ದಿನದಿಂದ ಅವಳು ಹಪಿಸುತ್ತಿದ್ದಳು. ಕಂಸನಿಂದ ಆಜ್ನೆ ಪಡೆದ ಮೇಲೆ, ಅವಳು ಗೋಕುಲಕ್ಕೆ ಬಂದು ಗೊಲ್ಲರ ನಾಯಕನ ಮನೆಯ ಮುಂದೆ ಹೊಂಚು ಹಾಕಿ ಕುಳಿತ್ತಿದ್ದಳು. ಸುದ್ದಿಯಿಂದ ತಿಳಿದು ಬಂದ, ಅಕರ್ಷಕವಾದ ಮಗುವು ಇರುವುದು ಆ ಮನೆಯಲ್ಲಿಯೆ. ಆ ಮನೆಯ ಸುತ್ತಮುತ್ತ ಕಾಡು ಇತ್ತು. ಅದನ್ನು ಗಮನಿಸಿದ ಅವಳಿಗೆ ಸಂತೋಷವಾಗಿತ್ತು. ಅವಾಗ ಆ ಮನೆಯಿಂದ ಲಾಲಿ ಹಾಡು ಕೇಳಿ ಬರಲು ಪ್ರಾರಂಭವಾಯಿತು.
**************
ಯಶೋದೆ ಲಾಲಿ ಹಾಡಿ ಮಗುವನ್ನು ಮಲಗಿಸಲು ಪ್ರಯತ್ನಿಸುತ್ತಿದ್ದಳು. ಮಗುವು ಹಾಯಾಗಿ ಮಲಗಿದರೆ, ತಾನು ಆರಾಮವಾಗಿ ಅಡುಗೆ ಕೆಲಸ ಮಾಡಿ ಮುಗಿಸಬಹುದು ಎಂದು ಮನದಲ್ಲಿ ಅಂದುಕೊಳ್ಳುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಮಗುವಿಗೆ ನಿದ್ರೆ ಆವರಿಸಿತು. ಅದನ್ನೆ ಕಾಯುತ್ತಿದ್ದ ಯಶೋದೆ ಮಗುವಿನ ಮೈಯ ಮೇಲೆ ವಸ್ತ್ರವನ್ನು ಹಾಸಿ ಅಡುಗೆ ಮನೆಯ ಕಡೆಗೆ ನಡೆದಳು. ಇದೇ ಸಮಯಕ್ಕಾಗಿ ಪೂತನಿ ಮನೆಯ ಹೊರಗಡೆ, ಅವಿತುಕೊಂಡು ಕಾಯುತ್ತಿದ್ದಳು. ಲಾಲಿ ಹಾಡು ನಿಂತ ಮೇಲೆ ಅವಳು ಮರೆಯಿಂದ ಹೊರಗೆ ಬಂದು ಕಿಟಕಿಯಲ್ಲಿ ನಿಲುಕಿ ನೊಡಿದಳು. ಮೊದಲಿಗೆ ಸಿಗುವುದೆ ಒಂದು ದೊಡ್ದ ಕೋಣೆ. ಆ ಕೋಣೆಯ ಮಧ್ಯದಲ್ಲಿ ತೊಟ್ಟಿಲನ್ನು ತೂಗು ಹಾಕಿದ್ದರು. ಆ ಕೋಣೆಯಲ್ಲಿ ಯಾರು ಇರಲಿಲ್ಲ. ಮಗುವಿನ ತಂದೆ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದನು. ಮಗುವಿನ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಡುಗೆ ಕೋಣೆ, ತೊಟ್ಟಿಲಿರುವ ಕೋಣೆಗೆ ಸ್ವಲ್ಪ ಅಡ್ಡವಾಗಿತ್ತು. ಅದನ್ನು ಅವಳು ಗಮನಿಸಿ ಸಂತೋಷ ಪಟ್ಟಿದ್ದಳು. ಮೆಲ್ಲನೆ ಶಬ್ದವಾಗದಂತೆ ಬಾಗಿಲನ್ನು ತೆರೆದು, ತೊಟ್ಟಿಲಿರುವ ಕೋಣೆಯನ್ನು ಹೊಕ್ಕಳು. ಮಗುವು ಹಾಯಾಗಿ ತೊಟ್ಟಿಲಲ್ಲಿ ಮಲಗಿತ್ತು. ಮೆಲ್ಲನೆ ಮಗುವನ್ನು ತನ್ನ ಕೈಯಲ್ಲಿ ಎತ್ತಿ ಕೊಂಡಳು. ಮಗುವನ್ನು ಎತ್ತಿ ಕೊಂಡು ಹೊರಗೆ ಬಂದಳು. ಮಗುವನ್ನು ತನ್ನ ಸೆರುಗಿನಲ್ಲಿ ಮರೆ ಮಾಚಿಮಾಡಿಕೊಂಡಳು. ನಂತರ ಮನೆಯ ಹತ್ತಿರವಿರುವ ಕಾಡಿನ ಕಡೆಗೆ ನಡೆದಳು. ಹಾಗೆ ಹೋಗುತ್ತಿರುವಾಗ ಕೆಲವೊಂದು ಮಂದಿ ಅವಳನ್ನು ಗಮನಿಸಿದರು, ಅವಳು ಸೆರಿಗಿನಲ್ಲಿ ಏನು ಮರೆಮಾಚಿಕೊಂಡಿರ ಬಹುದು ಎನಿಸಿದರು, ಯಾರಿಗು ಅದು ತಮ್ಮ ನಾಯಕನ ಮಗುವೆಂದು ಗೊತ್ತಾಗಿರಲಿಲ್ಲ.
ಪೂತನಿ ಕಾಡನ್ನು ಹೊಕ್ಕಿ ಸ್ವಲ್ಪ ದೂರ ಹೋದ ಮೇಲೆ, ಒಂದು ಮರದ ಕೆಳಗಡೆ ಕುಳಿತು ಕೊಂಡಳು. ತಾನು ತಂದಿರುವ ಚೀಲದಿಂದ ಒಂದು ಕುಪ್ಪಿಯನ್ನು ತೆಗೆದಳು. ಅದರಲ್ಲಿ ಇದ್ದದ್ದಾದರೇನು? ವಿಷ. ಹೌದು ಅದು ವಿಷದ ಕುಪ್ಪಿ ಆಗಿತ್ತು. ಕುಪ್ಪಿಯ ಮುಚ್ಚಳವನ್ನು ತೆರೆದು, ವಿಷವನ್ನು ಕೈ ಬೆರಳಲ್ಲಿ ತೆಗೆದು ಕೊಂಡು ತನ್ನ ಮೊಲೆಯ ತೊಟ್ಟಿಗೆ ಹಚ್ಚಿಕೊಳ್ಳಲು ಶುರು ಮಾಡಿದಳು.
****************
ಒಲೆಯ ಮೇಲೆ ಅನ್ನಕ್ಕಿಟ್ಟು, ಮಗು ಹೇಗೆ ನಿದ್ದೆ ಮಾಡುತ್ತಿದೆ ಎಂದು ನೋಡೋಣವೆಂದು ಯಶೋದೆ ಅಡುಗೆ ಮನೆಯಿಂದ ಹೊರಗೆ ಬಂದಳು. ಅಲ್ಲಿ ಮಗುವಿಲ್ಲದಿರುವುದನ್ನು ನೋಡಿ ಅವಕ್ಕಾದಳು. ಮುಚ್ಚಿದ ಬಾಗಿಲು ತೆರೆದಿರುವುದನ್ನ ಗಮನಿಸಿದಳು. ಅಯ್ಯೋ ದೇವರೆ ನನ್ನ ಮಗುವೆಲ್ಲಿ, ನನ್ನ ಕೃಷ್ಣನೆಲ್ಲಿ ಹೋದ, ಅಂತ ಬೊಬ್ಬೆ ಹಾಕಿ ಅಳಲು ಪ್ರಾರಂಭ ಮಾಡಿದಳು. ಅವಳ ಬೊಬ್ಬೆಯನ್ನ ಕೇಳಿ ನೆರೆ ಕೆರೆಯವರೆಲ್ಲ ಸೇರಿದರು. ಅವರೆಲ್ಲರಿಗು ಆ ಮಗುವೆಂದರೆ ತುಂಬಾ ಇಷ್ಟವಾಗಿತ್ತು. ಅದರ ತುಂಟಾಟ, ಮುದ್ದು ಮುಖ, ಸುಂದರ ಕಣ್ಣುಗಳು ಅವರೆಲ್ಲರಿಗು ಮುದ ಕೊಡುತ್ತಿತ್ತು. ತಮ್ಮ ನೋವನ್ನು ಮರೆಯಲು ಕೆಲವರು ಆ ಮಗುವನ್ನು ನೋಡಲಿಕ್ಕೆ ಬರುತ್ತಿದ್ದರು. ಅಕ್ಕ ಪಕ್ಕದ ಮನೆಯಲ್ಲಿರುವ ಹುಡುಗಿಯರಿಗಂತು ಆ ಮಗುವೊಂದಿಗೆ ಆಡದಿದ್ದರೇ ಸಮಾಧಾನವೇ ಇಲ್ಲ. ಅಂತ ಮಗುವು ಕಾಣೆಯಾಗಿದೆ ಅಂದರೆ, ಅವರೆಲ್ಲರು ಸೇರಿದ್ದರು. ಎಲ್ಲರು ಅಳಲು ಪ್ರಾರಂಭ ಮಾಡಿದರು. ಅಷ್ಟರಲ್ಲಿ ಗುಂಪಿನಲ್ಲಿ ಒಬ್ಬರು, ಅನುಮಾಸ್ಪದವಾಗಿ ಕಾಡಿನ ಕಡೆಗೆ ಹೋದ ಹೆಂಗಸೊಬ್ಬಳನ್ನು ನೋಡಿರುವುದಾಗಿ, ಅವಳು ಸೆರಿಗಿನಲ್ಲಿ ಏನನ್ನು ಮುಚ್ಚಿ ಕೊಂಡಿರುವುದನ್ನು ತಾನು ನೋಡಿರುವುದಾಗಿ, ಅದು ಮಗುವೇ ಇರ ಬೇಕಾಗಿ ಹೇಳಿದನು. ಅದನ್ನು ಕೇಳಿದ್ದೆ ತಡ, ಎಲ್ಲರು ಹೋ ಹೋ ಅಂತ ಕಾಡಿನ ಕಡೆಗೆ ಒಡಲು ಪ್ರಾರಂಭ ಮಾಡಿದರು.
*******************
ಪೂತನಿ ತನ್ನ ಮೊಲೆಯ ತೊಟ್ಟಿಗೆ ವಿಷವನ್ನು ಲೇಪಿಸಿ ಮುಗಿಸಿದ ಮೇಲೆ, ಮಗುವನ್ನು ಕೈಯಲ್ಲಿ ಎತ್ತಿ ಕೊಂಡಳು. ಮಗುವಿನ ಮುಖದ ಕಡೆಗೆ ಒಮ್ಮೆ ನೋಡಿದಳು. ಯಾರಿಗಾದರು ಮಮತೆ ಉಕ್ಕಿ ಹರಿಯ ಬೇಕಿತ್ತು. ಆದರೆ ಇವಳಿಗೆ ಅಂತ ಮಮಕಾರ ಬಿಡಿ, ವಿಕೃತವಾದ ನಗುವನ್ನು ಬೀರಿದಳು. ಅವಳು ಎಷ್ಟು ಮಕ್ಕಳನ್ನು ಕೊಂದಿಲ್ಲ, ಕೈಗೆ ಎತ್ತಿಕೊಂಡ ಮೇಲೆ ಯಾವ ಮಗುವು ಅಳದೇ ಇರಲಿಲ್ಲ. ಆದರೆ ಮೊದಲ ಬಾರಿ, ಅಳದೆ ಶಾಂತ ಚಿತ್ತವಾಗಿರುವ ಮಗುವನ್ನು ನೋಡಿದಳು. ಇನ್ನೇನು ಮಗುವಿನ ಬಾಯಿಗೆ ಮೊಲೆಯ ತೊಟ್ಟನ್ನು ತಾಗಿಸ ಬೇಕೆನ್ನುವಾಗ, ಜನರ ಬೊಬ್ಬೆ ಕೇಳಿ ಭಯಭೀತಳಾದಳು. ಜನರು ಹತ್ತಿರನೇ ಇರಬೇಕು, ತನ್ನ ಕಡೆಗೆ ಬರುತ್ತಿದ್ದಾರೆ. ಅವರ ಕೈಗೆ ಸಿಕ್ಕಿದರೆ ನನ್ನ ಪ್ರಾಣಕ್ಕೆ ಕುತ್ತು ಕಂಡಿತ. ಬೀಸುವ ದೊಣ್ಣೆಯಿಂದ ತಪ್ಪಿಸಿ ಕೊಂಡರೆ ನೂರು ವರುಷ ಆಯಸ್ಸು. ನಾನು ಮೊದಲು ತಪ್ಪಿಸಿ ಕೊಳ್ಳಬೇಕು. ಅವಳು ಓಡಲು ಹತ್ತಿದಳು. ಮಗುವನ್ನು ಕೈಲ್ಲಿ ಗಟ್ಟಿಯಾಗಿ ಹಿಡಿದು ಕೊಂಡಿದ್ದಳು. ವೇಗವನ್ನು ಇನ್ನು ಹೆಚ್ಚಿಸಿದಳು. ಎದಿರಿಗೆ ಸಿಗುವ ಗಿಡದ ಕೊಂಬೆಯನ್ನು ಕೈಲ್ಲಿ ಸವರುತ್ತ, ತನಗೆ ದಾರಿ ಮಾಡಿಕೊಳ್ಳುತ್ತ, ಎದಿರುಸಿರು ಬಿಡುತ್ತಾ ಓಡುತ್ತಿದ್ದಳು. ಪಟ್......ಒಣಗಿದ ಕೊಂಬೆಯೊಂದು ಅವಳ ಮೊಲೆಗೆ ತಾಗಿ ಸ್ವಲ್ಪ ಆಳವಾದ ಗಾಯವಾಯಿತು. ಓಡುತ್ತಾ ಇದ್ದ ಅವಳು, ತನಗೆ ಚುಚ್ಚಿದ ಕೊಂಬೆಯನ್ನು, ತನಗಾದ ಗಾಯವನ್ನು ಗಮನಿಸದೇ ಹೋದಳು. ಅವಳು ಓಡುತ್ತಲೇ ಇದ್ದಳು. ವಿಷವು ಅವಳ ದೇಹವನ್ನು ಪ್ರವೇಶ ಮಾಡಲು ಪ್ರಾರಂಭ ಮಾಡಿ, ಅವಳ ದೇಹವನ್ನು ಆಕ್ರಮಿಸುತ್ತಿತು. ಅವಳಿಗೆ ತಲೆ ಸುತ್ತು ಬರುತ್ತಿರುವುದು ಗೊತ್ತಾಗುತ್ತಿತ್ತು. ವೇಗವಾಗಿ ಓಡಲು ಶತ ಪ್ರಯತ್ನ ಮಾಡುತ್ತಿದ್ದರು ಅವಳಿಗೆ ಆಗುತ್ತಿರಲಿಲ್ಲ. ಕ್ರಮೇಣ ಓಡಿ ಓಡಿ, ಮಗುವನ್ನು ಹಿಡಿದುಕೊಂಡೆ ನೆಲಕ್ಕೇ ಕುಸಿದಳು.
ಮಗುವು ಅಳಲು ಶುರುಮಾಡಿತು. ಅದನ್ನು ಕೇಳಿ ಜನರು ಆ ಕಡೆಗೆ ಬಂದರು. ಪೂತನಿಯ ಮೆಲೆ ಮಲಗಿ ಕೊಂಡು ಅಳುತ್ತಿರುವ ಮಗುವನ್ನು ಕಂಡರು. ತನ್ನ ಮಗುವನ್ನು ನೋಡಿದ ಯಶೋದೆ, ಮಗುವನ್ನು ಎತ್ತಿಕೊಂಡು, ಲೊಚ ಲೊಚನೆ ಮುತ್ತನ್ನು ಕೊಡಲು ಆರಂಭಿಸಿದಳು. ತನ್ನ ಮಗುವು ಸಿಕ್ಕಿತೆಂದು ಸಂತೋಷ ಪಟ್ಟಳು. ಪೂತನಿ ಮೊಲೆಯಂದ ಹೊರ ಸೂಸುತ್ತಿರುವ ರಕ್ತವನ್ನು ನೋಡಿ, ಈ ಮಗುವೇ ತನ್ನನ್ನು ಕೊಲ್ಲಲು ಬಂದ ಅವಳನ್ನು ರಕ್ತ ಹೀರಿ ಸಾಯಿಸಿರಭೇಕು. ಇದು ಅಸಾಮನ್ಯ ಮಗುವೇ ಇರಬೇಕು. ಇದು ದೇವರ ಕುಡಿಯೇ ಇರ ಭೇಕು ಅಂದು ಕೊಂಡರು.
Subscribe to:
Post Comments (Atom)
No comments:
Post a Comment